ಗೋಂದು-
	ಗಿಡಗಳ ಕಾಂಡವನ್ನು ಅಥವಾ ಕಾಯಿಯ ಚವರ್iವನ್ನು ಗಾಸಿಮಾಡಿದಾಗ ಸ್ರವಿಸಿ ಕೊಂಚ ಹೊತ್ತಿನೊಳಗಾಗಿ ಗಾಜಿನಂತಿರುವ ಗಂಟುಗಳಾಗಿ ರೂಪಾಂತರಿಸುವ ರಸವಿಶೇಷ. ಸೂಕ್ಷ್ಮಜೀವಿಗಳು ಗಾಸಿ ಭಾಗವನ್ನು ಆಕ್ರಮಿಸಿ ಗಿಡಕ್ಕೆ ಅಥವಾ ಕಾಯಿಗೆ ಅಪಾಯವಾಗದಂತೆ ಗೋಂದು ರಕ್ಷಣೆಯನ್ನು ಒದಗಿಸುತ್ತದೆ. ಗೋಂದಿನಲ್ಲಿ ವಿವಿಧ ಬಗೆಗಳಿವೆ. ಇವೆಲ್ಲವೂ ಸ್ವಭಾವತಃ ಕಲಿಲಗಳು. ರಾಸಾಯನಿಕ ದೃಷ್ಟಿಯಿಂದ ನೈಸರ್ಗಿಕ ಗೋಂದುಗಳು ಬಹು ಶರ್ಕರಗಳು. ಇದುವರೆಗೆ ಸುಮಾರು ನಲವತ್ತರಷ್ಟು ಗೋಂದಿನ ಬಗೆಗÀಳನ್ನು ವಿಶ್ಲೇಷಿಸಲಾಗಿದ್ದರೂ ಯಾವ ಒಂದು ಗೋಂದಿನ ವಿಶಿಷ್ಟ ರಚನೆಯೂ ಖಚಿತವಾಗಿ ಗೊತ್ತಾಗಿಲ್ಲ. ಎಲ್ಲ ಗೋಂದುಗಳಲ್ಲಿ ನಾನಾಬಗೆಯ ಸಕ್ಕರೆಗಳ ಅಂಶಗಳು ಪರಸ್ಪರ ಬದ್ಧವಾಗಿ ಬಹುಶಾಖಾರೂಪಿ ಅಣುಗಳನ್ನು ನಿರ್ಮಿಸುತ್ತವೆ. 

	ಔದ್ಯೋಗಿಕವಾಗಿ ಕೆಲವು ಗೋಂದುಗಳು ಪ್ರಮುಖವಾಗಿವೆ. ನಾನಾಕ್ಷೇತ್ರಗಳಲ್ಲಿ ಬಳಕೆಯಲ್ಲಿರುವ ಗೋಂದುಗಳಿಗೆ ಉದಾಹರಣೆಗಳು : 1 ಅಕೇಸಿಯ ಗೋಂದು ಅಥವಾ ಅರಾಬಿಕ್ ಗೋಂದು.2 ಕೋಪಾಲ್ ವರ್ಗದ ಗೋಂದುಗಳು, 3 ಟ್ರಗಾಕಾಂತ್ ಗೋಂದು, 4 ಡಮಾರ್, 5 ಕೆನಡಾ ಬಾಲ್ಸಮ್ . 

	1 ಅರಾಬಿಕ್ ಗೋಂದು : ಅಕೇಸಿಯ (ಗೊಬ್ಬಳಿ, ಚಾಲಿ) ಗಿಡಗಳಿಂದ ದೊರೆಯುವ ಅಂಟು. ಇದರ ಬಣ್ಣ ಬಿಳಿಯ ವರ್ಣದಿಂದ ಹಿಡಿದು ಹಳದಿಯವರೆಗೆ ಇದೆ. ಇದಕ್ಕೆ ವಾಸನೆ ಇಲ್ಲ. ಬಿಸಿ ಮತ್ತು ತಣ್ಣೀರುಗಳಲ್ಲಿ ವಿಲೀನವಾಗಿ ಮಂದವಾದ ದ್ರಾವಣವನ್ನು ಕೊಡುತ್ತದೆ. ಆಲ್ಕೊಹಾಲಿನಲ್ಲಿ ವಿಲೀನವಾಗುವುದಿಲ್ಲ. ಜಲೀಯ ದ್ರಾವಣ ಲಿಟ್ಮಸಿನೊಡನೆ ಆಮ್ಲೀಯ ಪ್ರತಿಕ್ರಿಯೆಯನ್ನು ತೋರಿಸುತ್ತದೆ. ಅರಾಬಿಕ್ ಗೋಂದಿನಲ್ಲಿ ಆ ಗ್ಯಲಾಕ್ಟೋಸ್ ಮತ್ತು ಆ—ಗ್ಲೂಕ್ಯುರೋನಿಕ್ ಆಮ್ಲಗಳಿವೆ. ವಾಸ್ತವವಾಗಿ ಇದು ಈ ಆಮ್ಲದ ಕ್ಯಾಲ್ಸಿಯಮ್, ಸೋಡಿಯಮ್ ಮತ್ತು ಪೊಟಾಸಿಯಮ್ ಲವಣ. ಅರಾಬಿಕ್ ಗೋಂದನ್ನು ಆಮ್ಲಕ್ಕೆ ಪರಿವರ್ತಿಸಿ ನೀರಿನಲ್ಲಿ ಕುದಿಸಿದಾಗ ಐ—ಅರಾಬಿನೋಸ್. ಐ—ರ್ಯಾಮ್ನೋಸ್ ಮತ್ತು 3-ಔ-α-ಆ ಗ್ಯಲಾಕ್ಟೋ ಪೈರನೋಸಿಲ್ ದೊರೆಯುತ್ತವೆ. ಈ ಗೋಂದಿನ ರಾಸಾಯನಿಕ ರಚನೆಯ ಸ್ಪಷ್ಟ ಚಿತ್ರವಿನ್ನೂ ದೊರೆತಿಲ್ಲವಾದರೂ ತಾತ್ಕಾಲಿಕವಾಗಿ ಇದಕ್ಕೆ ಈ ಬಗೆಯ ರಚನೆಯನ್ನು ಕೊಡಲಾಗಿದೆ. 

	[ಗ್ಯಲಾ=ಗ್ಯಲಾಕ್ಟೋಸ್, ಗ್ಲೂ=ಆ— ಗ್ಲೂಕ್ಸುರೋನಿಕ್ ಆಮ್ಲ, ಅರಾ= ಅರಾಬಿನೋಸ್, ರ್ಯಾ=ರ್ಯಾಮ್ನೋಸ್. ಸಂಖ್ಯೆಗಳು ಬಂಧದಲ್ಲಿ ಒಳಗಾಗಿರುವ ಶರ್ಕರ ಸ್ಥಾನಗಳನ್ನು ಸೂಚಿಸುತ್ತವೆ.]

	ಅರಾಬಿಕ್ ಗೋಂದನ್ನು ಅಂಟುಪದಾರ್ಥವಾಗಿ ಬಳಸುವುದಲ್ಲದೆ ಔಷಧಿಗಳಲ್ಲಿ, ಶಾಯಿಗಳಲ್ಲಿ, ಬಟ್ಟೆಗಳ ಮೇಲೆ ಮುದ್ರಿಸುವುದರಲ್ಲಿ, ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ. ಆಹಾರ ವಸ್ತುಗಳಲ್ಲಿ ಮತ್ತು ಕಲಿಲಗಳನ್ನು ಸ್ಥಿರೀಕರಿಸುವುದರಲ್ಲಿ ಕೂಡ ಬಳಸುತ್ತಾರೆ. ದ್ರವಗಳನ್ನು ಮಂದಗೊಳಿಸುವ ಅಭಿಕಾರಕದಂತೆ ಇದರ ಉಪಯೋಗ ಹೆಚ್ಚು. 

	2 ಈಸ್ಟ್ ಇಂಡೀಸ್, ಫಿಲಿಪೀನ್ಸ್, ಆಸ್ಟ್ರೇಲಿಯ, ಮತ್ತು ಆಫ್ರಿಕ ಪ್ರದೇಶಗಳ ಕೆಲವು ಗಿಡಗಳಿಂದ ಕೋಪಾಲ್ ವರ್ಗದ ಗೋಂದುಗಳು ದೊರೆಯುತ್ತವೆ. ಇವಲ್ಲಿ ಕೆಲವು ಬಗೆಯವನ್ನು ಆಧುನಿಕ ಮೂಲಗಳಿಂದ ಮತ್ತೆ ಇನ್ನು ಕೆಲವನ್ನು ಪ್ರಾಚೀನ ಫಾಸಿಲ್ ಮೂಲಗಳಿಂದ ಪಡೆಯಲಾಗುತ್ತಿದೆ. ಫಿಲಿಫೀನ್ಸ್. ಮನಿಲ ಮತ್ತು ಪೆಂಟಿಯಾನಕುಗಳು ಮೃದುವಾಗಿರುತ್ತವೆ. ಇವು ಆಧುನಿಕ ವರ್ಗದವು. ಕಾಂಗೋ ಮತ್ತು ಕೌರಿಗಳು ಪ್ರಾಚೀನ ವರ್ಗದವು. ಇವು ಗಟ್ಟಿಯಾಗಿರುತ್ತವೆ. ಮೃದು ಕೋಪಾಲುಗಳು ಆಲ್ಕೊಹಾಲ್, ಕ್ಲೋರೋಫಾರಮ್ ಮತ್ತು ಟರ್ಪಂಟೈನುಗಳಲ್ಲಿ ಭಾಗಶಃ ವಿಲೀನವಾಗುವುದಿಲ್ಲ. ಹೆಚ್ಚು ಕಾಯಿಸಿದ ಬಳಿಕ ಇವು ಟರ್ಪಂಟೈನ ಮತ್ತು ಲಿನ್ ಬೀಜದ (ಲಿನ್ ಸೀಡ್) ಎಣ್ಣೆಯಲ್ಲಿ ವಿಲೀನವಾಗುತ್ತವೆ. ಕೋಪಾಲ್ ಗೋಂದುಗಳನ್ನು ವಾರ್ನಿಷ್ ಮತ್ತು ಮೆರಗು ವಸ್ತುಗಳನ್ನು ತಯಾರಿಸಲು ಬಳಸುತ್ತಾರೆ. 

	3 ದಕ್ಷಿಣ ಯೂರೋಪ್, ಗ್ರೀಸ್, ಟರ್ಕಿ ಮತ್ತು ಇರಾನ್ ದೇಶಗಳಲ್ಲಿ ಬೆಳೆಯುವ ಆಸ್ಟ್ರಾಗಾಲಸ್ ಫರ್ ಗಿಡಗಳಿಂದ ದೊರೆಯುವ ಗೋಂದುಗಳಿಗೆ ಟ್ರಗಾಕಾಂತ್ ಗೋಂದುಗಳೆಂದು ಹೆಸರು. ಇವು ಪಾರದರ್ಶಕ ಬಿಳಿಯ ಹಲಗೆಗಳಂತೆ ಅಥವಾ ಕುಂಡಲಿನಿ (ಹೆಲಿಕ್ಸ್) ಆಕಾರದಲ್ಲಿ ತಿರಿಚಿಕೊಂಡಿರುವ ಹಳದಿ ಬಣ್ಣದ ಹುಡಿಯಂತೆ ದೊರೆಯುತ್ತವೆ. ಪ್ರತ್ಯಾಮ್ಲೀಯ ದ್ರಾವಣಗಳಲ್ಲಿ ಮತ್ತು ಜಲೀಯ ಹೈಡ್ರೊಜನ್ ಪೆರಾಕ್ಸೈಡ್ ದ್ರಾವಣದಲ್ಲಿ ವಿಲೀನವಾಗುತ್ತವೆ. ನೀರಿನಲ್ಲಿ ಉಬ್ಬುತ್ತವೆ. ಆಲ್ಕೊಹಾಲಿನಲ್ಲಿ ವಿಲೀನವಾಗುವುದಿಲ್ಲ. ಇವುಗಳಲ್ಲಿ ಗ್ಯಲಾಕ್ಟೋಸ್,. ಫ್ಯೂಕೋಸ್, ಕ್ಸೈಲೋಸ್, ಅರಾಬಿನೋಡ್ ಮತ್ತು ಗ್ಲೂಕ್ಸುರೋನಿಕ್ ಆಮ್ಲಗಳ ಅಂಶಗಳಿವೆ. ಟ್ರಗಾಕಾಂತ್ ಗೋಂದುಗಳನ್ನು ಔಷಧಿಗಳ ತಯಾರಿಕೆ, ಚರ್ಮದ ಹದಮಾಡುವಿಕೆ, ಅಂಟುಗಳು ತಯಾರಿಕೆ, ಕ್ಯಾಲಿಕೋ ಮುದ್ರಣ, ಆಹಾರ ರಕ್ಷಣೆ, ತಿಳಿದ್ರಾವಣಗಳನ್ನು ಮಂದಗೊಳಿಸುವ ಸುಗಂಧ ದ್ರವ್ಯಗಳ ತಯಾರಿಕೆ ಮತ್ತು ಬಣ್ಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. 

	4 ಈಸ್ಟ್ ಇಂಡೀಸ್ ಮತ್ತು ಮಲಯದೇಶಗಳಲ್ಲಿನ ಕೆಲ ಬಗೆಯ ಗಿಡಗಳಿಂದ ದೊರೆಯುವ ಗೋಂದುಗಳಿಗೆ ಡಮಾರ್ ಗೋಂದುಗಳೆಂದು ಹೆಸರು. ಇವನ್ನು ಸಿಂಗಪುರ, ಬಟೇವಿಯ, ಸಯಾಂ ಮತ್ತು ಈಸ್ಟ್ ಇಂಡೀಸ್ ಎಂದು ವರ್ಗೀಕರಿಸಲಾಗಿದೆ. ಕಡೆಯ ವರ್ಗದ ಗೋಂದುಗಳಲ್ಲಿ ಬಾಟು, ತಿಳಿ ಅಥವಾ ಕರಿ ಎಂಬ ಉಪವರ್ಗಗಳಿವೆ. ಡಮಾರ್ ಗೋಂದುಗಳ ಬಣ್ಣ ಬಿಳಿಯಿಂದ ಹಿಡಿದು ಹಳದಿಯವರೆಗೆ. ಇವೆಲ್ಲ ಆಲ್ಕೊಹಾಲ್, ಬೆಂಜಿóೀನ್, ಟರ್ಪಂಟೈನ್ ಮತ್ತು ಎಣ್ಣೆಗಳಲ್ಲಿ ವಿಲೀನವಾಗುತ್ತವೆ. ಕೋಪಾಲ್ ಗೋಂದುಗಳಿಗಿಂತ ಇವುಗಳ ಆಮ್ಲೀಯತೆ ಕಡಿಮೆ. ಇತರ ಭೌತಗುಣಗಳಲ್ಲಿ ಈ ಗೋಂದುಗಳು ವೈವಿಧ್ಯವನ್ನು ತೋರುತ್ತವೆ. ಡಮಾರ್ ಗೋಂದುಗಳನ್ನು ಸ್ಪಿರಿಟ್ ವಾರ್ನಿಷುಗಳನ್ನು ತಯಾರಿಸಲು ಹಾಗೂ ಕಾಗದ ಮತ್ತು ಬಟ್ಟೆಗಳಿಗೆ ಬಿಗಿಯನ್ನು ಕೊಡಲು ಉಪಯೋಗಿಸುತ್ತಾರೆ. 

	5 ಕೆನಡಾ ಬಾಲ್ಸಮನ್ನು ಸಹ ಗೋಂದುಗಳ ಗುಂಪಿಗೆ ಸೇರಿಸಬಹುದು. ಕೆನಡಾ ಮತ್ತು ಅಮೆರಿಕದ ಸಂಯುಕ್ತ ಸಂಸ್ಥಾನಗಳ ಉತ್ತರ ಪ್ರದೇಶಗಳಲ್ಲಿ ಬೆಳೆಯುವ ಏಬಿಸ್ ಬಾಲ್ಸಾಮಿಯ ಮತ್ತು ಬಾಲ್ಸಮ್ ಫರ್ ಗಿಡಗಳಿಂದ ದೊರೆಯುವ ಈ ವಸ್ತು ನಸುಹಳದಿ ಅಥವಾ ಹಸಿರು-ಹಳದಿ ಬಣ್ಣವುಳ್ಳ ಪಾರದರ್ಶಕ ದ್ರವ. ಪೈನ್ ಮಾದರಿಯ ಹಿತವಾದ ಕಂಪನ್ನುಳ್ಳ ಈ ದ್ರವವನ್ನು ಗಾಳಿಗೆ ತೆರೆದಿಟ್ಟಾಗ ಗಟ್ಟಿಯಾಗಿ ಪಾರದರ್ಶಕವಾದ ವಾರ್ನಿಷ್ ಆಗಿ ಪರಿವರ್ತಿತವಾಗತ್ತದೆ. ಇದು ಬೆಂಜಿûೀನ್ ಮತ್ತು ಈಥರಿನಲ್ಲಿ ವಿಲೀನವಾಗುತ್ತದೆ. ಆದರೆ ನೀರಿನಲ್ಲಿ ವಿಲೀನವಾಗುವುದಿಲ್ಲ. 

	ಕೆನಡಾ ಬಾಲ್ಸಮಿನ ರಿಫ್ರೇಕ್ಷಣ ಸೂಚ್ಯಂಕ ಲೆನ್ಸುಗಳ ಸೂಚ್ಯಂಕದಷ್ಟೇ ಇರುವುದರಿಂದ ಇದನ್ನು ಭೂತಗನ್ನಡಿಗಳನ್ನು ಜಂಟಿಮಾಡಲು ಉಪಯೋಗಿಸುತ್ತಾರೆ. ಔಷಧಿಗಳ ತಯಾರಿಕೆಯಲ್ಲಿ ಮತ್ತು ಶ್ರೇಷ್ಠ ತರಗತಿಯ ಮೆರಗು ವಸ್ತುಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ.
(ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ